ಚೆಂಚಲಿ ಸೊಪ್ಪು  -
ಕೃಷಿ ಭೂಮಿಗಳಲ್ಲಿ, ಗೋಮಾಳಗಳಲ್ಲಿ, ಬೆಂಗಾಡು ಪ್ರದೇಶಗಳಲ್ಲಿ ಕಳೆಗಿಡವಾಗಿ ಬೆಳೆಯುವ ಒಂದು ಏಕ ವಾರ್ಷಿಕ ಇಲ್ಲವೆ, ಬಹುವಾರ್ಷಿಕ ಮೂಲಿಕೆ ಸಸ್ಯ. ಅಮರ್ಯಾಂತೇಸೀ ಕುಟುಂಬಕ್ಕೆ ಸೇರಿದೆ. ಡೈಜೆರ ಮ್ಯೂರಿಕೇಟ ಇದರ ಶಾಸ್ತ್ರೀಯ ಹೆಸರು. ಇದು ಏಷ್ಯ ಹಾಗೂ ಆಫ್ರಿಕಗಳ ಉಷ್ಣಪ್ರದೇಶಗಳ ಮೂಲವಾಸಿ. ಭಾರತದಲ್ಲಿ ಬಂಗಾಳಿ ಹಾಗೂ ಕರ್ನಾಟಕಗಳಲ್ಲಿ ಇದರ ವ್ಯಾಪ್ತಿ ಹೆಚ್ಚು. 30-60 ಸೆಂ.ಮೀ. ಎತ್ತರಕ್ಕೆ ಬೆಳೆಯುವ ಇದರ ಎಳೆಯ ಎಲೆಗಳನ್ನು ತರಕಾರಿಯಾಗಿ ಬಳಸುತ್ತಾರೆ. ಹಲವೆಡೆ ಕಾಲ್ನಡೆಗಳ ಮೇವಾಗಿ ಉಪಯೋಗಿಸುವುದುಂಟು. ಹೆಚ್ಚು ಪ್ರಮಾಣದಲ್ಲಿ ಇದರ ಎಲೆಗಳನ್ನು ತಿಂದರೆ ಭೇದಿ ಉಂಟಾಗುತ್ತದೆ. ಮೂತ್ರಸಂಬಂಧಿ ಕಾಯಿಲೆಗಳಲ್ಲಿ ಇದರ ಹೂ ಮತ್ತು ಬೀಜಗಳನ್ನು ಕೊಡುವುದಿದೆ.
(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ